ಪಠಾಣ್ ಕೋಟ್ -
	ಭಾರತದಲ್ಲಿರುವ ಪಂಜಾಬ್ ರಾಜ್ಯದ ಒಂದು ಪಟ್ಟಣ,  ಇದೇ ಹೆಸರಿನ ತಾಲ್ಲೂಕಿನ ಆಡಳಿತ ಕೇಂದ್ರ.  ರಾಜ್ಯದ ವಾಯುವ್ಯ ಭಾಗದಲ್ಲಿ ಗುರುದಾಸಪುರ ಜಿಲ್ಲೆಯಲ್ಲಿ ಗುರುದಾಸಪುರದಿಂದ ಈಶಾನ್ಯಕ್ಕೆ 33.6 ಕಿ.ಮೀ. ದೂರದಲ್ಲಿ, ಉ.ಅ. 320 16 ಮತ್ತು ಪೂ.ರೇ. 750 43 ಮೇಲೆ ಇದೆ.  ಇತಿಹಾಸ ಪ್ರಸಿದ್ಧ ಸ್ಥಳವಾಗಿರುವ ಇದು ಪಠಾಣ್ ರಾಜಮನೆತನವೊಂದರ ರಾಜಧಾನಿಯಾಗಿತ್ತು.  ಇಲ್ಲಿಯ ಅರಸರು ಮೊಗಲ್ ಚಕ್ರವರ್ತಿಗಳ ವಿರುದ್ಧ ಅನೇಕ ಬಾರಿ ಹೋರಾಟ ನಡೆಸಿದ್ದರು.

	ಭಾರತ-ಪಾಕಿಸ್ತಾನಗಳ ಗಡಿಯ ಸಮೀಪದಲ್ಲಿರುವ ಈ ಪಟ್ಟಣದಲ್ಲಿ 1947 ರಲ್ಲಿ ಭಾರತದ ವಿಭನೆಯ ಸಮಯದಲ್ಲಿ ಅನೇಕ ಮಂದಿ ನಿರಾಶ್ರಿತರು ಬಂದು ನೆಲಸಿದ್ದರಿಂದ ಇದರ ಜನಸಂಖ್ಯೆ ತೀವ್ರವಾಗಿ ಏರಿತು. ಪಠಾಣ್ ಕೋಟ್ ದಂಡಿನ ಪ್ರದೇಶ. ಪಠಾಣ್‍ಕೋಟ್ ಪೌರಪ್ರದೇಶ ಎರಡೂ ಸೇರಿ 1961ರಲ್ಲಿ ಈಗಿನ ಪಟ್ಟಣವಾಯಿತು. ಈ ಪಟ್ಟಣದ ಜನಸಂಖ್ಯೆ 76,355(1971) 

	ಈ ಪಟ್ಟಣ ಆಯಕಟ್ಟಿನ ಸ್ಥಳದಲ್ಲಿರುವುದರಿಂದ ಇದಕ್ಕೆ ಭೌಗೋಳಿಕ, ರಾಜಕೀಯ ಹಾಗೂ ವಾಣಿಜ್ಯಕ ಮಹತ್ವವಿದೆ.  ಇದು ಪರ್ವತಸೀಮೆ ಹಾಗೂ ಬಯಲುನಾಡಿನ ನಡುವಣ ವ್ಯಾಪಾರಕೇಂದ್ರ.  ಸುತ್ತಣ ಪ್ರದೇಶದ ಗೋದಿ ಮತ್ತು ಇತರ ಧಾನ್ಯಗಳು, ಮರಮುಟ್ಟು, ಉಣ್ಣೆ ಮತ್ತು ಚರ್ಮಗಳ ವ್ಯಾಪಾರ ಇಲ್ಲಿ ನಡೆಯುತ್ತದೆ.  ದೆಹಲಿ, ಅಮೃತ್‍ಸರ, ಚಂಡೀಗಢ, ಜಮ್ಮು, ಕುಲೂ, ಕಾಂಗ್ರ ಮೊದಲಾದ ಪ್ರವಾಸಿ ಕ್ಷೇತ್ರಗಳಿಗೆ ಸಾರಿಗೆ ಸಂಪರ್ಕ ವ್ಯವಸ್ಥೆಯ ಕೊಂಡಿ ಇದಾಗಿದೆ. ಈ ಭಾಗದಲ್ಲಿ ಇದೊಂದು ಪ್ರಮುಖ ರೈಲ್ವೆ ಜಂಕ್ಷನ್.  ಪಠಾಣ್‍ಕೋಟ್ ಅನ್ನು ಕಾಶ್ಮೀರದ ಹೆಬ್ಬಾಗಿಲು ಎನ್ನಲಾಗಿದೆ.  ಭಾರತ ವಿಭಜನೆಯಾಗಿ ಸಂಪರ್ಕ ಸಾರಿಗೆ ವ್ಯವಸ್ಥೆಗಳು ಅವ್ಯವಸ್ಥೆಗೆ ಒಳಗಾದಾಗ ಪಠಾಣ್‍ಕೋಟ್ ಹಾಗೂ ಜಮ್ಮು ವಿನ ನಡುವೆ ಸುಮಾರು 96 ಕಿಮೀ. ಉದ್ದದ ಹೊಸ ರೈಲು ಮಾರ್ಗ ಹಾಗೂ ಮೋಟಾರು ರಸ್ತೆಯನ್ನು ನಿರ್ಮಿಸಲಾಯಿತು.  ಈ ಪಟ್ಟಣ ಶೀಘ್ರವಾಗಿ ಅಭಿವೃದ್ಧಿಗೊಳ್ಳುತ್ತಿದೆ.  ಇದು ಗಡಿ ಪ್ರದೇಶದಲ್ಲಿರುವುದರಿಂದ ಸೈನಿಕ ಮಹತ್ವವೂ ಇದಕ್ಕಿದೆ.

	ಪಠಾಣ್‍ಕೋಟ್‍ನಲ್ಲಿ ಪ್ರವಾಸಿ ಆಕರ್ಷಣೆಗಳೇನೂ ಇಲ್ಲ.  ಆದರೆ ಇಲ್ಲಿಂದ ಸುಮಾರು 6 ಕಿ.ಮೀ. ದೂರದಲ್ಲಿ ಜಲಂಧರ್ ರಸ್ತೆಯಲ್ಲಿರುವ ದಾಮ್‍ತಾಲ್ ದೇಗುಲ ಸುಂದರವಾದ ಪ್ರಾಚೀನ ಐತಿಹಾಸಿಕ ದೇವಸ್ಥಾನ.  ಇದರ ಗೋಡೆಗಳ ಮೇಲೆ ರಾಮಾಯಣ ಮಹಾಭಾರತಗಳ ದೃಶ್ಯಗಳನ್ನು ಪಹಾರೀ ಶೈಲಿಯಲ್ಲಿ ಚಿತ್ರಿಸಲಾಗಿದೆ.  ಪಟ್ಟಣದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಮಾಲಿಕ್‍ಪುರ ಸಂಶೋಧನ ಕೇಂದ್ರ ಸುಂದರ ವಿಹಾರ ತಾಣ.  ಕೆಲವೇ ಕಿ.ಮೀ. ದೂರದಲ್ಲಿ ಡಾಲ್‍ಹೌಸಿ  ಗಿರಿಧಾಮವಿದೆ.  ಇಲ್ಲಿಗೆ 24 ಕಿ.ಮೀ. ದೂರದಲ್ಲಿ ರಾವಿ ನದಿಯ ದಂಡೆಯ ಮೇಲಿರುವ ಶಹಪುರ್ ಕಾಂಡಿ ದುರ್ಗ 16ನೆಯ ಶತಮಾನದಲ್ಲಿ ನಿರ್ಮಿತವಾದ್ದು.

	ಈ ಪಟ್ಟಣ ಕೈಮಗ್ಗದ ನೇಯ್ಗೆ ಕೈಗಾರಿಕೆಗೆ ಪ್ರಸಿದ್ಧವಾಗಿದೆ.  ಒಳ್ಳೆಯ ಕಂಬಳಿ ಮತ್ತು ಶಾಲುಗಳನ್ನು ಇಲ್ಲಿ ತಯಾರಿಸಲಾಗುತ್ತದೆ.  ಅಲ್ಲದೆ ಇಲ್ಲಿ ಆಹಾರ ಸಂಶ್ಲೇಷಣೆಯ ಪ್ರಸಿದ್ಧ ಕಾರ್ಖಾನೆ ಇದೆ.
(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ